ಕುಶಾಲನಗರ ಪಟ್ಟಣವು ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಪ್ರಮುಖ ಪಟ್ಟಣ ಮತ್ತು ಹೋಬಳಿಯ ಕೇಂದ್ರವಾಗಿದ್ದು, 2011ರ ಜನಗಣತಿಯಂತೆ 15,326 ಜನಸಂಖ್ಯೆಯನ್ನು ಹೊಂದಿರುತ್ತದೆ. ಕುಶಾಲನಗರ ಪಟ್ಟಣ ಪಂಚಾಯಿತಿಯು ಈ ಪಟ್ಟಣಕ್ಕೆ ಸ್ಥಳೀಯ ಸಂಸ್ಥೆಯಾಗಿರುತ್ತದೆ. ಈ ನಗರವು ಮಂಜಿನ ನಗರ ಮಡಿಕೇರಿಯಿಂದ 32 ಕಿ.ಮೀ. ಮತ್ತು ರಾಜ್ಯದ ಸಾಂಸ್ಕೃತಿಕ ನಗರ ಮೈಸೂರಿನಿಂದ 91 ಕಿ.ಮೀ. ಹಾಗೂ ರಾಜ್ಯದ ರಾಜಧಾನಿ ಬೆಂಗಳೂರಿನಿಂದ 236 ಕಿ.ಮೀ. ಅಂತರದಲ್ಲಿರುತ್ತದೆ. ಬೆಂಗಳೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ-275 ಮತ್ತು ಕೊಣನೂರು-ಮಾಕ್ಕುಟ್ಟ ರಾಜ್ಯ ಹೆದ್ದಾರಿ-91 ಈ ನಗರದ ಮೂಲಕ ಹಾದುಹೋಗುವ ಮುಖ್ಯ ಹೆದ್ದಾರಿಗಳಾಗಿವೆ.

          ಕುಶಾಲನಗರ ಹೋಬಳಿಯ ಬಹುಪಾಲು ಭೂಭಾಗವು ಅರಣ್ಯ ಪ್ರದೇಶ ಹಾಗೂ ಬೆಟ್ಟ ಶ್ರೇಣಿಗಳಿಂದ ಕೂಡಿರುತ್ತದೆ.  ಕೊಡಗು ಜಿಲ್ಲೆಯಲ್ಲಿ ಹಲವಾರು ಪ್ರೇಕ್ಷಣೀಯ ತಾಣಗಳು ಹಾಗೂ ಯಾತ್ರಾಸ್ಥಳಗಳಿದ್ದು ಇವುಗಳಿಂದಾಗಿ ಕುಶಾಲನಗರ ಪಟ್ಟಣದ ಮೇಲೆ ನೇರ ಪರಿಣಾಮ ಬೀರುತ್ತವೆ.  ಈ ಹಿನ್ನೆಲೆಯಲ್ಲಿ ಪಟ್ಟಣವನ್ನು ಯೋಜನಾಬದ್ದವಾಗಿ ಅಭಿವೃದ್ದಿಪಡಿಸುವ ದೃಷ್ಟಿಯಿಂದ ಕುಶಾಲನಗರ ಪಟ್ಟಣವು ಸೇರಿದಂತೆ ಸುತ್ತಮುತ್ತಲ ಗ್ರಾಮಗಳನ್ನು ಸೇರಿಸಿಕೊಂಡು ಸರ್ಕಾರವು ಒಟ್ಟು 1105 ಹೆಕ್ಟೇರ್ ವಿಸ್ತೀರ್ಣಕ್ಕೆ  ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 4(ಸಿ)ರನ್ವಯ ಸ್ಥಳೀಯ ಯೋಜನಾ ಪ್ರದೇಶ ಘೋಷಿಸಿ, ಸದರಿ ಪ್ರದೇಶಕ್ಕೆ ಕುಶಾಲನಗರ ಯೋಜನಾ ಪ್ರಾಧಿಕಾರವನ್ನು ರೂಪಿಸಿ ಆದೇಶ ಹೊರಡಿಸಿರುತ್ತದೆ.

ಮೂಲ: ಕುಶಾಲನಗರ ಯೋಜನಾ ಪ್ರಾಧಿಕಾರ, ಕರ್ನಾಟಕ ಸರ್ಕಾರ.